ನಮ್ಮ ಪರಿಸರ : ಸಾಲುಮರಗಳುಸಚಿತ್ರ ಕೈಪಿಡಿ 

ಟಿ.ಎಸ್. ಶ್ರೀನಿವಾಸ & ಕಾರ್ತಿಕೇಯನ್ ಎಸ್.

ನಗರಗಳ ರಸ್ತೆಗಳಲ್ಲಿ ವರ್ಷವಿಡೀ ಸಾಲುಸಾಲಾಗಿ ಹೂದಳೆದು ನಿಂತು ಚೆಲುವಿನ ಚಿತ್ತಾರ ಬಿಡಿಸುವ ಮರಗಳ ಸೌಂದರ್ಯಕ್ಕೆ ಮನಸೋಲದವರಿಲ್ಲ. ಕೆಲವು ಮರಗಳು ತಮ್ಮ ಆಕಾರ ಮತ್ತು ಗಾತ್ರದಿಂದ ಗಮನಸೆಳೆದರೆ ಮತ್ತೆ ಕೆಲವು ವರ್ಣರಂಜಿತ ಕುಸುಮಗಳಿಂದ ಹಾಗು ನವಿರಾದ ಸುಗಂಧದಿಂದ ಮನಸ್ಸಿಗೆ ಮುದಕೊಡುತ್ತವೆ. ಈ ಮರಗಳು ನಗರಪ್ರದೇಶದ ಪರಿಸರದ ಒಂದು ಅವಿಭಾಜ್ಯ ಅಂಗವಾಗಿ, ಅನೇಕ ಜೀವಸಂಕುಲಗಳಿಗೆ ಆಹಾರ ಮತ್ತು  ಆಶ್ರಯವನ್ನೂ ಒದಗಿಸುತ್ತವೆ. ಮರಗಳ ವೈವಿಧ್ಯತೆ ಮತ್ತು ಸಂಖ್ಯೆ ಹೆಚ್ಚಾದಂತೆ ಆ ಪರಿಸರದಲ್ಲಿ ಇತರ ಜೀವಿಗಳ ವೈವಿಧ್ಯತೆಯೂ ಹೆಚ್ಚಾಗುತ್ತದೆ. ಹೀಗಾಗಿ ನಗರಪ್ರದೇಶಗಳಲ್ಲಿ ಮರಗಳನ್ನು ಸಂರಕ್ಷಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಈ ಹಸಿರು ಸಿರಿಗೆ ನಿರಂತರವಾಗಿ ಕೊಡಲಿಯೇಟು ಬೀಳುತ್ತಿರುವುದು ಅತ್ಯಂತ ಆತಂಕದ ವಿಷಯ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಹಾಗೂ  ಸಾರ್ವಜನಿಕರಲ್ಲಿ ನಮ್ಮ ಸುತ್ತಲಿನ ಸಾಲುಮರಗಳ ಬಗ್ಗೆ ಅರಿವು, ಆಸಕ್ತಿ ಮೂಡಿಸಿ ಅವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಉತ್ತೇಜಿಸುವುದು ಅತ್ಯವಶ್ಯಕ. ಈ ಪ್ರಯತ್ನಕ್ಕೆ ಪೂರಕವಾಗುವಂತೆ ಸಚಿತ್ರವಾದ, ಸೂಕ್ತ ಮಾಹಿತಿಯಿರುವ, ಸುಲಭವಾಗಿ ಉಪಯೋಗಿಸಬಹುದಾದ ಕನ್ನಡ ಭಾಷೆಯ ಕೈಪಿಡಿಯ ಅಗತ್ಯವನ್ನು ಮನಗಂಡು ಈ ಪುಸ್ತಕವನ್ನು ಪ್ರಕಟಿಸಲಾಗಿದೆ. 

ಸಾಮಾನ್ಯವಾಗಿ ಬೆಳೆಸಲಾಗುವ ೫೦ ಪ್ರಭೇದದ ಸಾಲುಮರಗಳ ಬಗ್ಗೆ ಸಚಿತ್ರ, ಸರಳ ಹಾಗೂ ಸಂಕ್ಷಿಪ್ತ ಮಾಹಿತಿಯುಳ್ಳ ಈ ಕೈಪಿಡಿಯನ್ನು ವಿದ್ಯಾರ್ಥಿಗಳು ಮತ್ತು ಪರಿಸರಾಸಕ್ತರಿಗೆ ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮರಗಳನ್ನು ಸುಲಭವಾಗಿ ಗುರುತಿಸಲು ಸಹಾಯವಾಗುವಂತೆ ಹೂಗಳ ವರ್ಣದ ಆಧಾರದಲ್ಲಿ ವರ್ಗೀಕರಿಸಿ, ಚಿತ್ರಸೂಚಿಗಳೊಂದಿಗೆ ಸಾಮಾನ್ಯ ಗುಣ-ಲಕ್ಷಣಗಳು, ಹೂದಳೆಯುವ ಋತುಮಾನ ಹಾಗೂ ಹೂಗಳ ಪರಿಮಳದ ಮಾಹಿತಿಯನ್ನು ನೀಡಲಾಗಿದೆ.  ಪ್ರತಿ ಪ್ರಭೇದದ ಮರದ ಗುಣ-ಲಕ್ಷಣಗಳು ಹಾಗೂ ವಿಶೇಷತೆಗಳ ಸಂಕ್ಷಿಪ್ತ ಪರಿಚಯದ ಜೊತೆಗೆ ಕೆಳಕಂಡ ಅಂಶಗಳ ಬಗೆಗೂ ಉಪಯುಕ್ತ ಮಾಹಿತಿಯನ್ನೂ ಪಡೆಯಬಹುದು.

ಮರಗಳ ಸಸ್ಯಶಾಸ್ತ್ರೀಯ ಹೆಸರು ಮತ್ತು ಆಂಗ್ಲಭಾಷೆಯ ಹೆಸರು

ಎಲೆಗಳ ವಿನ್ಯಾಸ ಮತ್ತು ಜೋಡಣೆ

ಫಲಗಳ ಛಾಯಾಚಿತ್ರಗಳು

ಮರದ ಎತ್ತರ ಹಾಗೂ ವಿಸ್ತಾರ

ಅವಲಂಬಿತ ಜೀವಜಾಲ

ಸ್ಥಳಾವಕಾಶ ಹಾಗೂ ಉದ್ದೇಶಕ್ಕನುಗುಣವಾಗಿ ಸೂಕ್ತ ಪ್ರಭೇದದ ಮರಗಳ ಆಯ್ಕೆ

ಸಸಿಗಳನ್ನು ನೆಡುವ ವಿಧಾನ

ಪಾರಿಭಾಷಿಕ ಪದಕೋಶ

ಸುತ್ತಮುತ್ತಲಿನ ಮರಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದು, ಕುತೂಹಲ ಮತ್ತು ವೈಜ್ಞಾನಿಕ ಅಧ್ಯಯನದ ಹವ್ಯಾಸವನ್ನು ಬೆಳೆಸಿಕೊಂಡು, ಮರಗಳನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಗತ್ಯ. ಸುಲಭ ಬೆಲೆಯಲ್ಲಿ ಲಭ್ಯವಿರುವ, ಅತ್ಯುತ್ತಮ ಛಾಯಾಚಿತ್ರಗಳು ಹಾಗು ಉನ್ನತ ಶ್ರೇಣಿಯ ಮುದ್ರಣವಿರುವ ಈ ಕೈಪಿಡಿಯು ನಮ್ಮಸುತ್ತಲಿನ ಮರಗಳ ಬಗ್ಗೆ ಕಾಳಜಿ ಮತ್ತು ಕಳಕಳಿಯುಳ್ಳ ಎಲ್ಲರಿಗೂ ಅತ್ಯುಪಯುಕ್ತ. ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ – www.ecoedu.in ಜಾಲತಾಣಕ್ಕೆ ಭೇಟಿನೀಡಿ.